fbpx

ಗಾಣದ ಎಣ್ಣೆ ಬಾಳ್ವಿಕೆ ಹೆಚ್ಚು

ಗ್ರಾಮೀಣ ಭಾಗಗಳಲ್ಲಿ ಚಾಲ್ತಿಯಲ್ಲಿದ್ದ ನೂರಾರು ವರ್ಷಗಳ ಇತಿಹಾಸ ಹೊಂದಿರುವ ಎಣ್ಣೆ ಹಿಂಡುವ ಗಾಣಗಳು ಇಂದು ಅಪರೂಪವಾಗಿ ಬಿಟ್ಟಿವೆ.

ಎಣ್ಣೆ ಕಾಳುಗಳಿಂದ ಸಾಂಪ್ರದಾಯಿಕವಾಗಿ ಎಣ್ಣೆಗಳನ್ನು ತೆಗೆಯುತ್ತಿದ್ದ ಗಾಣಗಳು ಆಧುನಿಕತೆಯ ಭರಾಟೆಯಿಂದಾಗಿ ಅಸ್ತಿತ್ವವನ್ನೇ ಕಳೆದುಕೊಂಡಿವೆ. ಎಣ್ಣೆ ತೆಗೆಯುವುದು ಗಾಣಿಗ ಸಮುದಾಯದವರ ಕುಲ ಕಸುಬಾಗಿತ್ತು. ಇಂದು ಈ ಕಸುಬು ಯಂತ್ರಗಳ ಹಾವಳಿಯಿಂದಾಗಿ ಮೂಲೆಗುಂಪಾಗಿದೆ.

ನೈಸರ್ಗಿಕತೆಯ ಪ್ರತೀಕ: ಇಂದಿನ ರಾಸಾಯನಿಕ ಮಿಶ್ರಿತ ಎಣ್ಣೆಗಳು ಮನುಷ್ಯರಿಗೆ ಇನ್ನಿಲ್ಲದ ಕಾಯಿಲೆಗಳನ್ನು ಆಹ್ವಾನಿಸುತ್ತಿವೆ. ಆದರೆ ಹಲವಾರು ವರ್ಷಗಳ ಇತಿಹಾಸವಿರುವ ಈ ಮರದ ಗಾಣಗಳಿಂದ ತೆಗೆಯುವ ಎಣ್ಣೆಗಳು ರಾಸಾಯನಿಕಗಳಿಂದ ಹೊರತಾಗಿರುವುದು ಮಾತ್ರವಲ್ಲದೇ ನೈಸರ್ಗಿಕತೆಯ ಪ್ರತೀಕವೂ ಆಗಿತ್ತು. ಅತ್ಯಂತ ಸುವಾಸನೆ ಭರಿತವಾಗಿರುತ್ತಿದ್ದ ಎಣ್ಣೆಯಲ್ಲಿ ಪೋಷಕಾಂಶಗಳು ಸಮೃದ್ಧವಾಗಿದ್ದವು ಎಂದು ವೈಜ್ಞಾನಿಕವಾಗಿಯೂ ದೃಢಪಟ್ಟಿದೆ.

ಮೂಲೆಗುಂಪು: ಮರಗಳು ಹಾಗೂ ರುಬ್ಬುವ ಕಲ್ಲುಗಳಿಂದ ತಯಾರಿಸಿದ ಗಾಣಗಳು ಇಂದು ಮನೆ ಮನೆಗಳಲ್ಲಿ ಉಪಯೋಗವಿಲ್ಲದೇ ಮೂಲೆಗುಂಪಾಗಿವೆ. ನಮ್ಮ ಹಿರಿಯರ ಆರೋಗ್ಯದ ಗುಟ್ಟು ಕೂಡ ಗಾಣಗಳೇ ಆಗಿವೆ. ಏಕೆಂದರೆ ಇದರಲ್ಲಿ ತಯಾರಿಸುವ ಎಣ್ಣೆಗಳು ಕಲಬೆರಕೆ ರಹಿತವಾಗಿರುವುದರಿಂದ ಆರೋಗ್ಯಕ್ಕೂ ಉತ್ತಮವಾಗಿದ್ದವು. ಆದರೆ ಸಾಂಪ್ರದಾಯಿಕತೆಯ ಕೊಂಡಿಯಾಗಿರುವ ಗಾಣಗಳು ಮರೆಯಾಗುತ್ತಿರುವುದರಿಂದ ಜನರು ಉತ್ತಮ ಆರೋಗ್ಯದಿಂದಲೂ ವಂಚಿತರಾಗುತ್ತಿದ್ದಾರೆ.

ಹಲವು ಬಗೆಯ ಎಣ್ಣೆಗಳು: ಗಾಣದಲ್ಲಿ ಕೇವಲ ತೆಂಗಿನಕಾಯಿಯ ಎಣ್ಣೆಗಳನ್ನು ಮಾತ್ರವಲ್ಲ, ಮರದ ದೋಣಿಗಳಿಗೆ ಬಳಸುವ ಹೊನ್ನೆಣ್ಣೆ, ಎಳ್ಳಿನಿಂದ ತಯಾರಿಸುವ ಎಳ್ಳೆಣ್ಣೆ, ಸಾಸಿವೆ ಎಣ್ಣೆ, ನೆಲಗಡಲೆ (ವಳ್ಳೆಣ್ಣೆ) ಎಣ್ಣೆ ಹೀಗೆ ಹತ್ತು ಹಲವು ಬಗೆಯ ಎಣ್ಣೆಗಳನ್ನು ತೆಗೆಯಲಾಗುತ್ತಿತ್ತು. ಎಣ್ಣೆ ತೆಗೆದ ಗಾಣದವರಿಗೆ ಪ್ರತಿಯಾಗಿ ಅಕ್ಕಿ ಅಥವಾ ಕಾಯಿಗಳನ್ನು ನೀಡಲಾಗುತ್ತಿತ್ತು ಎನ್ನುತ್ತಾರೆ ಹಿರಿಯರು.

ಗಾಣದ ಎಣ್ಣೆ ಬಾಳ್ವಿಕೆ ಹೆಚ್ಚು

ಪ್ರಸ್ತುತ ಪ್ಯಾಕೆಟ್‌ಗಳಲ್ಲಿ ಲಭ್ಯವಾಗುವ ಎಣ್ಣೆಗಳನ್ನು ಹೆಚ್ಚೆಂದರೆ 6 ತಿಂಗಳ ಕಾಲ ಉಪಯೋಗಿಸಬಹುದು. ಆದರೆ ಗಾಣಗಳ ಮೂಲಕ ಹಿಂಡುವ ಎಣ್ಣೆಗಳನ್ನು ವರ್ಷಾನುಗಟ್ಟಲೇ ಶೇಖರಿಸಿಡಲಾಗುತ್ತಿತ್ತು. ಜತೆಗೆ ವರ್ಷ ಕಳೆದರೂ ಎಣ್ಣೆಯಲ್ಲಿನ ಗುಣಮಟ್ಟ, ಸುವಾಸನೆಗಳಲ್ಲಿ ಯಾವುದೇ ಬದಲಾವಣೆ ಆಗದಿರುವುದು ಅವುಗಳ ಪರಿಶುದ್ಧತೆಗೆ ಸಾಕ್ಷಿಯಾಗಿದ್ದವು.

ಕೋಣ, ಎತ್ತುಗಳ ಬಳಕೆ

ಗಾಣ ಎಂದರೆ ಎಣ್ಣೆ ಕಾಳು ಅಥವಾ ಉತ್ಪನ್ನಗಳನ್ನು ಗಾಣದಲ್ಲಿ ಹಾಕಿ ಕೇವಲ ಬಟನ್‌ ಒತ್ತುವ ಮೂಲಕ ಎಣ್ಣೆ ತೆಗೆಯುವ ಪ್ರಕ್ರಿಯೆ ಅಲ್ಲ. ಬದಲಾಗಿ ವಿದ್ಯುತ್‌ಗಳನ್ನು ಬಳಸದೇ ಉತ್ಪನ್ನಗಳನ್ನು ರುಬ್ಬುವ ಕಲ್ಲುಗಳ ಒಳಗೆ ಹಾಕಿ ಮರದ ತುಂಡುಗಳಿಂದ ವೃತ್ತಾಕಾರದಲ್ಲಿ ತಿರುವುತ್ತಾ ಬರಬೇಕು. ಬೃಹತ್‌ ಗಾತ್ರದ ಮರದ ತುಂಡುಗಳನ್ನು ಹಿಡಿಯಲು ಮನುಷ್ಯರಿಗೆ ಅಸಾಧ್ಯವಾದ ಸಂದರ್ಭ ಕೋಣ ಅಥವಾ ಎತ್ತುಗಳನ್ನು ಬಳಸಲಾಗುತ್ತಿತ್ತು.

ಗಾಣ ಮರೆಯಾಗುತ್ತಿರುವುದು ಬೇಸರದ ವಿಷಯ. ಪ್ರಸ್ತುತ ಜನತೆಗೆ ವೇಗವಾಗಿ ತಯಾರಾಗುವ ವಸ್ತುಗಳು ಬೇಕು ವಿನಃ ಆರೋಗ್ಯವಂತ ಜೀವನ ಬೇಡವಾಗಿದೆ. ಯುವ ಸಮೂಹ ಕೂಡ ಇದರಿಂದಾಗಿ ವಿಮುಖರಾಗುತ್ತಿದ್ದು, ಐಟಿ ಬಿಟಿಯಂತಹ ಉದ್ಯೋಗ ಕ್ಷೇತ್ರಗಳತ್ತ ಸಾಗುತ್ತಿದ್ದಾರೆ. ಇದರಿಂದಾಗಿ ಸಾಂಪ್ರದಾಯಿಕ ಕುಲ ಕಸುಬುಗಳು ಮರೆಯಾಗುತ್ತಿದೆ.

– ಬಿ.ಜಿ.ನಾಗರಾಜ ಗಾಣಿಗ, ಬೀಜಾಡಿ.

 

ಎಣ್ಣೆಯನ್ನು ತೆಗೆಯುವ ವಿಧಾನ

ಮೊದ ಮೊದಲು ಗಾಣದಿಂದ ಎಣ್ಣೆಯನ್ನು ತೆಗೆಯುವ ಅಭ್ಯಾಸವಿತ್ತು. ಗಾಣಗಳಿಂದ ಸ್ವಲ್ಪ ಪ್ರಮಾಣದಲ್ಲಿ ಎಣ್ಣೆಯನ್ನು ಉತ್ಪಾದನೆ ಮಾಡಲಾಗುತ್ತದೆ. ಈಗಿನ ಕಾಲದಲ್ಲಿ ಎಕ್ಸುಪೆಲ್ಲರು ಯಂತ್ರಗಳನ್ನು ಉಪಯೋಗಿಸಿ ಎಣ್ಣೆ ತೆಗೆಯುತ್ತಿದ್ದಾರೆ. ಎಕ್ಸುಪೆಲ್ಲರು ಯಂತ್ರಗಳನ್ನು ಬಳಸುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಎಣ್ಣೆಯನ್ನು ಉತ್ಪಾದನೆ ಮಾಡಲಾಗುತ್ತದೆ. ಗಾಣದಿಂದ ಬರುವ ಹಿಂಡಿಯಲ್ಲಿ ೧೧.೦%ಮೇಲೆ ಎಣ್ಣೆ ಉಳಿದಿರುತ್ತದೆ. ಆದರೆ ಎಕ್ಸುಪೆಲ್ಲರು ಯಂತ್ರಗಳಿಂದ ಬರೋ ಹಿಂಡಿಯಲ್ಲಿ ೬-೭% ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಎಣ್ಣೆ ಉಳಿದಿರುತ್ತದೆ. ಶೇಂಗಾ ಹಿಂಡಿಯಲ್ಲಿ ಉಳಿದಿರುವ ಎಣ್ಣೆಯನ್ನು ಸಾಲ್ವೆಂಟ್ ಪ್ಲಾಂಟ್ ಎಂಬ ಕೈಗಾರಿಕೆ ಯಂತ್ರ ಯಲ್ಲಿ ನಡೆಸಿ ತೆಗೆಯುವರು. ಸಾಲ್ವೆಂಟ್ ಪ್ಲಾಂಟ್ನಿಂದ ಹೊರಗೆ ಬರೋ ಹಿಂಡಿಯಲ್ಲಿ ೧.೦% ಕ್ಕಿಂತ ಕಡಿಮೆಯಾಗಿ ಎಣ್ಣೆ ಉಳಿದಿರುತ್ತದೆ. ಹಿಂಡಿನಿಂದ ಪೂರ್ಣವಾಗಿ ಎಣ್ಣೆಯನ್ನು ತೆಗೆದ ಮೇಲೆ ಹಿಂಡಿಯ ಪ್ರೋಟಿನ್ ಆಂಶ ಜಾಸ್ತಿ ಆಗುತ್ತದೆ. ಎಣ್ಣೆ ತೆಗೆದ ಹಿಂಡಿಯನ್ನು ಹಸುಗಳಿಗೆ ಮೇವಾಗಿ ಬಳಸುತ್ತಾರೆ, ಮತ್ತು ಹೊಲಗಳಲ್ಲಿ ಎರುಬನ್ನಾಗಿಯೂ ಉಪಯೋಗಿಸುತ್ತಾರೆ.

ಶೇಂಗಾ ಎಣ್ಣೆಯ ಭೌತಿಕ ಮತ್ತು ರಾಸಾಯನಿಕ ಲಕ್ಷಣಗಳು

ಗಾಣ ಮತ್ತು ಎಕ್ಸುಪೆಲ್ಲರು ಕಾರ್ಖಾನೆಯಲ್ಲಿ ಉತ್ಪತ್ತಿ ಮಾಡಿದ ಎಣ್ಣೆಯನ್ನು ಫಿಲ್ಟರು ಪ್ರೆಸ್ಸ್(filter press)ಯಲ್ಲಿ ಸೋಸಿ, ಆಮೇಲೆ ನೇರವಾಗಿ ಅಡುಗೆ ಎಣ್ಣೆಯಾಗಿ ಉಪಯೋಗಿಸ ಬಹುದು. ಆದರೆ ಸಾಲ್ವೆಂಟ್ ಪ್ಲಾಂಟ್ ನಿಂದ ತೆಗೆದಿದ್ದ ಎಣ್ಣೆಯು ನೇರವಾಗಿ ತಿಂಡಿ ಮಾಡುವುದಕ್ಕೆ,ಅಥವಾ ಉಪಯೋಗಿಸುವುದಕ್ಕೆ ಯೋಗ್ಯವಲ್ಲ. ಸಾಲ್ವೆಂಟ್ ಪ್ಲಾಂಟ್ನಿಂದ ಬಂದ ಎಣ್ಣೆಯನ್ನು ರಿಫೈನರಿ(Refinery)ನಲ್ಲಿ ಶುದ್ಧಿಗೊಳಿಸಿ(refine), ಆಮೇಲೆ ಅಡುಗೆ ಎಣ್ಣೆಯಾಗಿ ಉಪಯೋಗಿಸುತ್ತಾರೆ. ಶೇಂಗಾಎಣ್ಣೆ ನಾನ್-ಡ್ರಯಿಂಗ್ ಎಣ್ಣೆ. ಹೊಂಬಣ್ಣ ದಲ್ಲಿ ಕಾಣಿಸುತ್ತದೆ. ಇದರಲ್ಲಿ ಅಸಂತೃಪ್ತ ಫ್ಯಾಟಿ ಆಮ್ಲಗಳು(ಕೊಬ್ಬಿನ ಆಮ್ಲಗಳು)ಒಟ್ಟಿಗೆ ೮೦% ವರೆಗೆ ಇರುತ್ತವೆ. ಬೇರೆ ಎಣ್ಣೆಗಳಲ್ಲಿ ಕಾಣಸಿಗದ ಕೆಲವು ಕೊಬ್ಬಿನ ಆಮ್ಲಗಳು ಶೆಂಗಾ ಎಣ್ಣೆಯಲ್ಲಿ ಇವೆ.ಅವು ಅರಾಚಿಡಿಕ್, ಎಯಿಕೊಸೆಯಿನಿಕ್, ಬೆಹೆನಿಕ್ ಮತ್ತು ಲೆಗ್ನೊಸೆರಿಕ್ ಆಮ್ಲಗಳು. ಶೆಂಗಾ ಎಣ್ಣೆ ಯಲ್ಲಿರುವ ಕರೋಟಿನಾಯಿಡ್ಸು ಕಾರಣ ಎಣ್ಣೆ ಹಳದಿ (yellow) ಬಣ್ಣದಲ್ಲಿ ಕಂಡು ಬರುತ್ತದೆ. ಈ ಎಣ್ಣೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಟೊಕೊಪೆರೊಲ್ಸು ಎನ್ನುವ ಆಂಟಿನೋಯಿಡ್ ಇದ್ದ ಕಾರಣವಾಗಿ ಎಣ್ಣೆ ತ್ವರಿತವಾಗಿ ಕೆಡುವುದಿಲ್ಲ. ಎಣ್ಣೆಯಲ್ಲಿ ವಿಟಮಿನ್ ‘ಇ ‘ಮತ್ತು ವಿಟಮಿನ್ ‘ಕೆ’ ಇರುತ್ತವೆ.